ಕುರ್ದಿಸ್ತಾನ್

ನೈಋತ್ಯ ಏಷ್ಯದಲ್ಲಿ ವಿಶಾಲವಾದ ಪ್ರಸ್ಥಭೂಮಿ ಮತ್ತು ಪರ್ವತಶ್ರೇಣಿಯಿಂದ ಕೂಡಿದ ಒಂದು ಪ್ರದೇಶ. ಕುರ್ದ್ ಜನರಿಂದಾಗಿ ಕುರ್ದಿಸ್ತಾನ ಎಂಬ ಹೆಸರು ಬಂದಿದೆ. ರಾಜಕೀಯವಾಗಿಯಾಗಲಿ ಭೌಗೋಳಿಕವಾಗಿಯಾಗಲಿ ಈ ಪ್ರದೇಶವನ್ನು ಒಂದು ಘಟಕವಾಗಿ ಪರಿಗಣಿಸಿಲ್ಲವಾದಕಾರಣ ಇದರ ಎಲ್ಲೆಗಳನ್ನು ನಿರ್ದಿಷ್ಟವಾಗಿ ಗುರುತಿಸಲು ಸಾಧ್ಯವಿಲ್ಲ. ತುರ್ಕಿಯ ಪೂರ್ವ ಭಾಗದ ಪ್ರದೇಶ, ಇರಾನಿನ ವಾಯವ್ಯ ಭಾಗ, ಇರಾಕ್ ಮತ್ತು ಸಿರಿಯದ ಈಶಾನ್ಯ ಭಾಗ, ಇದರಲ್ಲಿ ಸೇರಿವೆಯೆಂದು ಸ್ಥೂಲವಾಗಿ ಹೇಳಬಹುದು. ವಾಯವ್ಯ_ಆಗ್ನೇಯಾಭಿಮುಖವಾಗಿ 600 ಮೈ, ಉದ್ದವಾಗಿರುವ ಇದರ ಅಗಲ 125 ಮೈ. ಕುರ್ದ್ ಜನರೆಲ್ಲ ಈಭಾಗದಲ್ಲಿದ್ದಾರೆಂದು ಹೇಳಲಾಗದು. ಏಕೆಂದರೆ, ಹಲವರು ಅರ್ಮೇನಿಯನ್ ಸೋವಿಯತ್ ಗಣರಾಜ್ಯದಲ್ಲೂ ವಾಸಿಸುತ್ತಿದ್ದಾರೆ. 1920ರಲ್ಲಿ ಇದನ್ನೊಂದು ರಾಜಕೀಯ ಪ್ರದೇಶವನ್ನಾಗಿ ಮಾಡುವ ಉದ್ದೇಶವಿತ್ತಾದರೂ ಆ ವಿಚಾರವನ್ನು ಅಲ್ಲಿಗೆ ಕೈಬಿಡಲಾಯಿತು. 

	ಈ ಪ್ರದೇಶ ಜಾಗ್ರೋಸ್ ಪರ್ವತಶ್ರೇಣಿಯಿಂದ ಕೂಡಿದೆ. ಇಲ್ಲಿ 13,000'ಗೂ ಎತ್ತರದ ಪರ್ವತಗಳಿವೆ. ಅಧಿಕ ಮಳೆಯಾಗುತ್ತದೆ. ಇಲ್ಲಿ ಬೇಸಗೆಯಲ್ಲಿ ಹೆಚ್ಚು ಸೆಕೆ, ಚಳಿಗಾಲದಲ್ಲಿ ಹೆಚ್ಚು ಚಳಿ. ವರ್ಷದ 4-5 ತಿಂಗಳುಗಳ ಕಾಲ ಹಿಮ ಬೀಳುತ್ತದೆ. ಕೆಲವು ಪ್ರದೇಶಗಳಲ್ಲಿ ಬೇಸಗೆಯಲ್ಲಿ ಪರ್ವತಗಳ ಮೇಲಿನ ಹಿಮ ಕರಗಿ ನೀರಾಗಿ ಹರಿಯುವುದರಿಂದ ಇಳಿಜಾರಿನಲ್ಲಿ ಅಧಿಕವಾಗಿ ಹುಲ್ಲು ಬೆಳೆಯುತ್ತದೆ. ಇದು ಪಶುಪಾಲನೆ ಮತ್ತು ಕುರಿಪೋಷಣೆಗೆ ಸಹಾಯಕ. ಇಳಿಜಾರು ಪ್ರದೇಶಗಳಲ್ಲಿ ಓಕ್, ಆಷ್, ಎಲ್ಮ್ ಮರಗಳು ಬೆಳೆಯುತ್ತವೆ.

	ಬತ್ತ, ಜೋಳ, ಹತ್ತಿ, ಹೊಗೆಸಪ್ಪು, ದ್ರಾಕ್ಷಿ, ಮತ್ತು ಎಣ್ಣೆಬೀಜಗಳು ಇಲ್ಲಿಯ ಮುಖ್ಯ ಬೆಳೆ. ನೇಯ್ಗೆ ಮತ್ತು ಚರ್ಮ ಹದಮಾಡುವ ಗೃಹಕೈಗಾರಿಕೆಗಳಿವೆ. ಇಲ್ಲಿಯ ರತ್ನಕಂಬಳಿಗಳು ಪ್ರಸಿದ್ಧವಾದವು. ಬಹುತೇಕ ಸುನ್ನಿಪಂಗಡದ ಮುಸ್ಲಿಮರಾದ ಈ ಜನ ಹೆಚ್ಚಾಗಿ ಪರ್ವತಾರೋಹಿಗಳು, ಇಲ್ಲವೆ ಅಲೆಮಾರಿಗಳು. ಇವರು ತಮ್ಮ ಕುರಿ ಮತ್ತು ಮೇಕೆಗಳೊಂದಿಗೆ ಬೇಸಗೆಯಲ್ಲಿ ಪರ್ವತಗಳಿಗೂ ಚಳಿಗಾಲದಲ್ಲಿ ಕಣಿವೆಗಳಿಗೂ ಅಲೆಯುತ್ತಿರುತ್ತಾರೆ. ಇತ್ತೀಚಿಗೆ ಕೆಲವರು ನೀರಾವರಿ ಯೋಜನೆಗಳಿಂದಾಗಿ ಒಂದು ಕಡೆ ನೆಲೆಸಿ ವ್ಯವಸಾಯ ಮಾಡುತ್ತಿದ್ದಾರೆ. ಹಲವರು ಕೆಲಸಗಳಿಗಾಗಿ ನೆರೆರಾಜ್ಯಗಳನ್ನು ಸೇರಿದ್ದಾರೆ. 

	ಯುದ್ಧಪ್ರಿಯರಾದ ಈ ಜನ ಆಟೋಮನ್ನರ ಕಾಲದಿಂದಲೂ ಸ್ವಾತಂತ್ರ್ಯವನ್ನು ಬಯಸಿ ಹೋರಾಡುತ್ತಿದ್ದಾರೆ. ತಮ್ಮ ಪ್ರದೇಶ ಮೂರು ರಾಜ್ಯಗಳ ಆಧಿಪತ್ಯಕ್ಕೆ ಒಳಗಾಗಿರುವುದಕ್ಕೆ ತಮ್ಮ ಅಸಂತೋಷವನ್ನು ವ್ಯಕ್ತಪಡಿಸಿರುವುದಲ್ಲದೆ ತಮ್ಮ ಇಚ್ಛೆಯನ್ನು ಆಗಾಗ್ಗೆ ನಡೆಯುವ ಅಂತರ್ಯುದ್ಧಗಳಲ್ಲಿ ಸ್ಪಷ್ಟಪಡಿಸುತ್ತ ಬಂದಿದ್ದಾರೆ. ಕುರ್ದ್ ಜನ ವಾಸಿಸುವ ಎಲ್ಲ ಪ್ರದೇಶಗಳನ್ನೂ ಒಳಗೊಂಡಂತೆ ಸರ್ವತಂತ್ರ ಸ್ವತಂತ್ರವಾದ ಕುರ್ದಿಸ್ತಾನವನ್ನು ಸ್ಥಾಪಿಸುವುದೇ ಈ ಅಂತರ್ಯುದ್ಧಗಳ ಮುಖ್ಯೋದ್ದೇಶವಾಗಿತ್ತು. 

	ಪುರಾತತ್ವ : ಕುರ್ದಿಸ್ತಾನದಲ್ಲಿ ದೊರೆತಿರುವ ಅನೇಕ ಇತಿಹಾಸಪೂರ್ವ ನೆಲೆಗಳು ಮಾನವನ ನಾಗರಿಕತೆಯ ಬೆಳೆವಣಿಗೆಯ ಘಟ್ಟಗಳನ್ನು ನಿರ್ಧರಿಸಲು ಸಹಾಯಕವಾಗಿವೆ. ಸುಲೈಮಾನಿಯಾ ನಗರದ ಸಮೀಪದಲ್ಲಿರುವ ಹಜೆರ್‍ಮರ್ದ್ ಮತ್ತು ಜಾರ್ಸಿ ಖೆಮ್ ಖೆಮಲ್ ಬಯಲಿನಲ್ಲಿರುವ ಬಾರ್ದಬಲ್ಕ ಮತ್ತು ಪಾಲೆಗಾವ್ರ, ಜಾಬ್ ನದೀದಂಡೆಯಲ್ಲಿರುವ ಶಕಫ್ತ್ ಶನಿದಾರ್ ಅಂಥ ಮುಖ್ಯ ನೆಲೆಗಳು. ಇವುಗಳಲ್ಲಿ ಅತ್ಯಂತ ಪ್ರಾಚೀನವಾದ ಬಾರ್ದಬಲ್ಕದಲ್ಲಿ ಹಳೆಯ ಶಿಲಾಯುಗಕ್ಕೆ ಸೇರುವ ಸಚೋಲಿಯನ್_ಲೆವಾಲ್‍ವಾ ರೀತಿಯ ಕೈಗೊಡಲಿಗಳು ಮತ್ತು ಚಕ್ಕೆಯ ಆಯುಧಗಳು ದೊರೆಕಿವೆ. ಇವುಗಳ ಜೊತೆಗೆ ಖಡ್ಗಮೃಗ ಮತ್ತು ಆನೆಯ ಪಳೆಯುಳಿಕೆಗಳೂ ಸಿಕ್ಕಿವೆ. ಅವುಗಳ ಆಧಾರದ ಮೇಲೆ ಈ ಸಂಸ್ಕøತಿ ಪ್ಲೀಸ್ಟೋಸೀನಿನ ಮೂರನೆಯ ಹಿಮಯುಗದ ಅಂತ್ಯ ಅಥವಾ ಮೂರನೆಯ ಉಷ್ಣಯುಗದಲ್ಲಿ ಪ್ರಚಲಿತವಾಗಿದ್ದಿರಬೇಕೆಂದು ಊಹಿಸಲಾಗಿದೆ. ಹಜೆರ್ ಮರ್ದ್ ಮತ್ತು ಶನಿದಾರ್_ಡಿಗಳಲ್ಲಿ ವುರ್ಮ್ (ನಾಲ್ಕನೆಯ) ಹಿಮಯುಗದ ಆದಿಭಾಗಕ್ಕೆ ಸೇರುವ ಲೆವಾಲ್_ವೌಸ್ವೀರಿಯನ್ ರೀತಿಯ ಸಂಸ್ಕøತಿಗಳಿದ್ದುವು; ಅನಂತರ ಅದೇ ಹಿಮಯುಗದ ಉತ್ತರಭಾಗದಲ್ಲಿ ಪ್ರಚಲಿತವಾಗಿದ್ದ ಕೂರಲಗು ಫಲಕಗಳ ಆಯುಧಗಳು ಬಳಕೆಯಲ್ಲಿದ್ದ ಸಂಸ್ಕøತಿಗಳು ಹಜೆರ್ ಮರ್ದ್, ಶನಿದಾರ್-ಸಿ, ಜಾರ್ಸಿ ಮತ್ತು ಪಾಲೆಗಾವ್ರಗಳಲ್ಲಿ ದೊರಕಿವೆ. ಪೀಸ್ಟೋಸೀನ್ ಯುಗದ ತರುವಾಯ ಇತ್ತೀಚಿನ ಉಷ್ಣಯುಗದ ಆದಿಭಾಗದಲ್ಲಿದ್ದ ಸೂಕ್ಷ್ಮಶಿಲಾಯುಗದ ಸಂಸ್ಕøತಿಗಳಿಂದ ಹಿಡಿದು ಮೆಸಪೊಟೇಮಿಯದ ಅತ್ಯಂತ ಪ್ರಾಚೀನ ಲೋಹಯುಗದ ಸಾಂಸ್ಕøತಿಕ ಘಟ್ಟದ ವರೆಗಿನ ಬೆಳೆವಣಿಗೆ ಜಾರ್ಸಿ ಮತ್ತು ಶನಿದಾರ್‍ಗಳಲ್ಲಿ ಕಂಡುಬರುತ್ತದೆ. ಕುರ್ದಿಸ್ತಾನ ಬಹುಮಟ್ಟಿಗೆ ಪರ್ವತ ಪ್ರದೇಶ ಮತ್ತು ಪ್ರಸ್ಥಭೂಮಿ ಪ್ರದೇಶವಾದ್ದರಿಂದ ಈ ಸಂಸ್ಕøತಿಗಳಿಗೆ ಆವಶ್ಯಕವಾದ ನೈಸರ್ಗಿಕ ಪರಿಸರ ಇಲ್ಲಿತ್ತು. ಆದರೆ ಉಚ್ಚನಾಗರಿಕತೆ ಬೆಳೆದುದು ಬೇರೆ ನೈಸರ್ಗಿಕ ಪರಿಸರದಲ್ಲಿ, ಈ ಕಾಲದ ಸಾಂಸ್ಕøತಿಕ ಕೇಂದ್ರಗಳು ನದೀ ಬಯಲುಗಳಲ್ಲಿರುವುದರಿಂದ, ಮುಂದಿನ ಇತಿಹಾಸದಲ್ಲಿ ಕುರ್ದಿಸ್ತಾನದ ಪಾತ್ರ ಕ್ಷೀಣವಾಯಿತು. ಈ ಕಾಲದಲ್ಲಿ ಕುರ್ದಿಸ್ತಾನ ಸಾಂಸ್ಕøತಿಕವಾಗಿ ಪಕ್ಕದ ನದೀ ಬಯಲುಗಳಿಗಿಂತ ಹಿಂದುಳಿದಿದ್ದು ಅಲ್ಲಿಯ ನಾಗರಿಕತೆಯ ಅಂಶಗಳನ್ನು ಆಗಾಗ್ಯೆ ಸ್ವೀಕರಿಸುತ್ತಿತ್ತು. ಅಲ್ಲದೆ ಮುಂದಿನ ಇತಿಹಾಸದುದ್ದಕ್ಕೂ ಕುರ್ದಿಸ್ತಾನದ ಭಾಗಗಳು ಸುತ್ತ ಮೆರೆಯುತ್ತಿದ್ದು ಅನೇಕ ರಾಜಕೀಯ ಘಟಕಗಳ ಭಾಗವಾಗಿತ್ತು. ಅಕ್ಕಡ್, ಅಸ್ಸೀರಿಯ, ಸಿಟ್ಟೈಟ್, ಚಾಲ್ಡಿಯ, ಪರ್ಷಿಯ, ರೋಂ, ಸಸ್ಸಾನಿಯ ಮತ್ತು ಅರಬ್ ಚಕ್ರಾಧಿಪತ್ಯಗಳ ಭಾಗವಾಗಿತ್ತು.
(ಎಸ್.ಎನ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ